ವ್ಯಾಯಾಮ ಶಾಲೆ
	ಅಂಗಸಾಧನೆಗಾಗಿ ಬಳಸುವ ಒಂದು ಕೊಠಡಿ. ಸೂಕ್ತ ಉಪಕರಣಗಳೊಡನೆ ಕೂಡಿದ ಅಂಗಸಾಧನೆಯ ಸ್ಥಳ, ಶಾರೀರಿಕ ವಿವಿಧ ಕ್ರಿಯೆಯ ಅಭ್ಯಾಸಕ್ಕಾಗಿ ಮತ್ತು ಕ್ರೀಡಾ ಸ್ಪರ್ಧೆಗಾಗಿ ತರಬೇತು ಪಡೆಯುವ ಒಂದು ವಿಶಾಲ ಪ್ರದೇಶದಲ್ಲಿ ನಿರ್ಮಿಸುವ ದೊಡ್ಡ ಕಟ್ಟಡವನ್ನು ವ್ಯಾಯಾಮ ಶಾಲೆ ಎಂದು ಕರೆಯುತ್ತಾರೆ. ಕೆಲವು ಶಾಲೆಗಳಲ್ಲಿ ವಿಶೇಷ ಕಾರ್ಯಕ್ರಮಗಳಿಗಾಗಿ, ಪ್ರದರ್ಶನಕ್ಕಾಗಿ ಈ ಜಾಗವನ್ನು ಉಪಯೋಗಿಸುವುದುಂಟು. ಯುರೋಪಿನ ದೇಶಗಳಲ್ಲಿ ಕೆಲವೊಂದು ಬಗೆಯ ಶಾಲೆಯನ್ನೇ ಜಿಮ್ನೇಸಿಯಮ್ ಎಂದು ಕರೆಯುತ್ತಾರೆ. 

	ಜಿಮ್ನೇಸಿಯಮ್ ಎಂಬ ಹೆಸರು ಗ್ರೀಕರಿಂದ ಬಂದಿದೆ. ಈ ಪದದ ಅರ್ಥ ನಗ್ನರಾಗಿ ವ್ಯಾಯಾಮ ಮಾಡುವ ಸ್ಥಳ. ಹಿಂದೆ ಗ್ರೀಸಿನಲ್ಲಿ ಜಿಮ್ನೇಸಿಯಮ್‍ಗಳಲ್ಲಿ ನಗ್ನರಾಗಿ ವ್ಯಾಯಾಮ, ಅಂಗ ಸಾಧನೆಗಳನ್ನು ಮಾಡುತ್ತಿದ್ದರು. ಇವುಗಳಲ್ಲಿ ಸ್ನಾನಗೃಹ, ವಸ್ತುಗಳನ್ನಿಡುವ ಕೋಣೆ ಮೊದಲಾದ ಅನುಕೂಲತೆಗಳು ಇರುತ್ತಿದ್ದವು. ಜೊತೆಗೆ ಸಭಾಭವನ ಇರುತ್ತಿತು. ಈ ಭವನಗಳಲ್ಲಿ ವಿದ್ವಾಂಸರಿಂದ, ದಾರ್ಶನಿಕರಿಂದ ಭಾಷಣ ಮಾಡಿಸುತ್ತಿದ್ದರು. ಗ್ರೀಸಿನಲ್ಲಿ ಕಲೆ, ವಿಜ್ಞಾನ ವಿಷಯಗಳನ್ನು ಕಲಿಸುವ ಶಾಲೆಗಳು ಅಸ್ತಿತ್ವಕ್ಕೆ ಬರಲು ಮೂಲತಃ ಜಿಮ್ನೇಸಿಯಮ್‍ಗಳೇ ಕಾರಣ. 

	ರೋಮನ್ನರು ವ್ಯಾಯಾಮ ಮಾಡುವ ಸ್ಥಳವನ್ನು ಯುದ್ಧ ದೇವತೆಯಾದ ಮಾರ್ಸ್‍ನ ಹೆಸರಿನಿಂದ ಕರೆಯುತ್ತಿದ್ದರು (ಫೀಲ್ಡ್ ಆಫ್ ಮಾರ್ಸ್) ವ್ಯಾಯಾಮ ಶಾಲೆಗಳಿಗೆ ಸ್ವಚ್ಛವಾದ ವಾತಾವರಣ ಗಾಳಿ, ಬೆಳಕು ಇರುವ ಸ್ಥಳ ಅಗತ್ಯವಾಗಿರುತ್ತದೆ. ಬಿಸಿಲಿನಿಂದ ಪ್ರಯೋಜನವನ್ನು ಪಡೆಯಬೇಕಾದಂಥ ವ್ಯಾಯಾಮಗಳನ್ನು ಮಾಡುವುದಕ್ಕಾಗಿ ವ್ಯಾಯಾಮ ಶಾಲೆ ಬಯಲಿನಲ್ಲಿರುತ್ತದೆ. ಸಂಜೆ ಶಾರೀರಿಕ ಚಟುವಟಿಕೆ ನಡೆಸುವುದಕ್ಕಾಗಿ ವಿದ್ಯುತ್ ದೀಪ ವ್ಯವಸ್ಥೆ ಇರುತ್ತದೆ. ಅನುಭವಿ ವ್ಯಾಯಾಮ ಶಿಕ್ಷಕರು ಹಂತಹಂತವಾಗಿ ಕಲಿಸುತ್ತಾರೆ. ಯಾವುದೇ ನ್ಯೂನತೆ ಹೋಗಲಾಡಿಸುವುಕ್ಕಾಗಲಿ ಅಥವಾ ನಿರ್ದಿಷ್ಟ ವ್ಯಾಧಿ ಪರಿಹಾರಕ್ಕಾಗಲಿ ವ್ಯಾಯಾಮ, ಅಂಗ ಸಾಧನೆಗಳ ಅವಶ್ಯಕತೆ ಇದ್ದರೆ ಅದನ್ನು ಕ್ರಮಬದ್ಧವಾಗಿ ಅಭ್ಯಾಸ ಮಾಡಿಸುತ್ತಾರೆ. 

	14ನೆಯ ಶತಮಾನದಲ್ಲಿ ಫ್ರಾನ್ಸಿನ ಜೆ.ಜೆ.ರುಸೊ, ಜರ್ಮನಿಯ ಜೆ.ಬಿ.ಬೇಸಡೋ ಮತ್ತು ಸ್ವಿಟ್ಜರ್ಲೆಂಡಿನ ಪೆಸ್ಟಾಲೇಸಿ ಇವರು ವ್ಯಾಯಾಮ ಶಿಕ್ಷಣದಲ್ಲಿ ಜಾಗೃತಿ ಮೂಡಿಸಿದರು. ಸ್ವಿಡನ್ನಿನ ಪಿ.ಎಚ್.ಲಿಂಗ್ (1770-1839), ಡೆನ್ಮಾರ್ಕಿನ ಪ್ರಾನ್ಸ್ ನಾಕ್ಟೆಗಲ್ (1777-1847), ಜರ್ಮನಿಯ ಎಫ್.ಎಲ್.ಜಾನ್ ವ್ಯಾಯಾಮ ಶಿಕ್ಷಣದ ತತ್ತ್ವಗಳನ್ನು ಅನುಷ್ಠಾನಕ್ಕೆ ತರುವುದನ್ನು ವಿವರಿಸಿದ ಪ್ರಮುಖರು. 

	19ನೆಯ ಶತಮಾನದಲ್ಲಿ ಯುರೋಪಿನಲ್ಲೆಲ್ಲ ಕ್ರೀಡೆಗಳು ಜನಪ್ರಿಯಗೊಂಡವು, ಶಾಲಾ ಕಾಲೇಜುಗಳಲ್ಲಿ ವ್ಯಾಯಾಮ ಶಾಲೆಗಳನ್ನು ತೆರೆದರು. ಬ್ರಿಟಿಷರ ಕಾಲದಲ್ಲಿ ಪಾಶ್ಚಾತ್ಯ ಕ್ರೀಡೆಗಳು ಶರೀರ ಶಿಕ್ಷಣದ ಪದ್ಧತಿಗಳಾಗಿ ಭಾರತದಲ್ಲಿ ಪ್ರಚಾರಕ್ಕೆ ಬಂದವು. ಸ್ವದೇಶಿ ಆಂದೋಲನ ಪ್ರಾರಂಭವಾದ ಅನಂತರ ವ್ಯಾಯಾಮ ಶಾಲೆಗಳು, ಅಖಾಡ, ತಾಲೀಮುಖಾನೆಗಳು ಪುನರುತ್ಥಾನವಾದವು. ಲಾಠಿ ಮತ್ತು ಖಡ್ಗವರಸೆ, ಸಾಮು, ಕುಸ್ತಿ ಮೊದಲಾದ ಚಟುವಟಿಕೆಗಳು ಜನಪ್ರಿಯವಾದವು. 

	ಮದರಾಸಿನಲ್ಲಿ 1920ರಲ್ಲಿ ವ್ಯಾಯಾಮ ಶಿಕ್ಷಣ ತರಬೇತಿ ಕೇಂದ್ರ ಸ್ಥಾಪಿತವಾಯಿತು. ಎಚ್.ಸಿ.ಬಕ್ ಪ್ರಧಾನ ಶಿಕ್ಷಕನಾಗಿದ್ದ. ಅಮರಾವತಿಯ ಶ್ರೀ ಹನುಮಾನ್ ವ್ಯಾಯಾಮ ಪ್ರಸಾರಕ ಮಂಡಲ 1914ರಲ್ಲಿ, ಲಕ್ನೊದ ಕ್ರಿಶ್ಚಿಯನ್ ಶರೀರ ಶಿಕ್ಷಣ ಕಾಲೇಜು 1937ರಲ್ಲಿ ಸ್ಥಾಪಿತವಾದವು ಕೇಂದ್ರ ಸರ್ಕಾರ 1954ರಲ್ಲಿ ಸ್ಥಾಪಿಸಿದ ರಾಷ್ಟ್ರೀಯ ಕ್ರೀಡಾ ಮಂಡಲಿ ಮತ್ತು ರಾಷ್ಟ್ರೀಯ ಕ್ರೀಡಾ ಸಂಸ್ಥೆಗಳು ವ್ಯಾಯಾಮ ಶಾಲೆಗಳಿಗೆ ಉತ್ತೇಜನ ಕೊಡುತ್ತಿವೆ. 

	ಪ್ರಾಚೀನ ಇತಿಹಾಸದಲ್ಲಿ ನಾಲಂದ, ತಕ್ಷಶಿಲಾ ವಿಶ್ವವಿದ್ಯಾಲಯಗಳಲ್ಲಿ ವ್ಯಾಯಾಮ ಶಿಕ್ಷಣದ ವಿಭಾಗಗಳಿದ್ದವು. ರಜಪೂತರಲ್ಲಿ ಹಲವಾರು ಕಠಿಣ ವ್ಯಾಯಾಮ ಸ್ಪರ್ಧೆಗಳಿದ್ದವು. ಮರಾಠರ ಕಾಲದಲ್ಲಿ ಮಹಾರಾಷ್ಟ್ರದ ಹಳ್ಳಿಹಳ್ಳಿಗಳಲ್ಲಿ ಕುಸ್ತಿಗಳ ಅಂಗಸಾಧನೆ ಅಭ್ಯಾಸಕ್ಕೆ ಅಖಾಡಗಳು ಸ್ಥಾಪಿಸಲ್ಪಟ್ಟವು. ಮುಸಲ್ಮಾನರ ಆಳಿಕೆ ಕಾಲದಲ್ಲಿ ಕುಸ್ತಿ, ಮುಷ್ಟಿಯುದ್ಧ, ಈಜು, ಗೂಳಿಕಾಳಗ ಸ್ಪರ್ಧೆಗಳು ನಡೆದ ದಾಖಲೆಗಳಿವೆ. 

	ಕಾಲೇಜು ವಿಶ್ವವಿದ್ಯಾನಿಲಯಗಳಲ್ಲಿ ಪ್ರತಿವರ್ಷ ಅಂಗಸೌಷ್ಠವ ಸ್ಪರ್ಧೆ ಜರುಗುತ್ತವೆ. ರಾಜ್ಯ, ರಾಷ್ಟ್ರೀಯ ಮಟ್ಟದಲ್ಲೂ ಈ ಸ್ಪರ್ಧೆಗಳು ನಡೆಯುತ್ತವೆ. ಶ್ರೀಭಾರತ ಸ್ಪರ್ಧೆ 1960 ರಿಂದ ಪ್ರತಿವರ್ಷ ಜರುಗುತ್ತಿದೆ. ಈ ಸ್ಪರ್ಧೆ ನಡೆಯುವುದು ಭಾರತೀಯ ದೇಹದಾಢ್ರ್ಯ ಫೆಡರೇಷನ್ನಿನ ಆಶ್ರಯದಲ್ಲಿ. ಇದರ ಜೊತೆಯಲ್ಲಿ ಬಲಶಾಲಿ (ಮಿಸ್ಟರ್‍ಸ್ಟ್ರಾಂಗ್‍ಮನ್), ಘನಸ್ನಾಯುವಂತ; (ಮಿಸ್ಟರ್ ಮಸóಲ್‍ಮನ್) ಸ್ಪರ್ಧೆಗಳು ಪ್ರತಿವರ್ಷ ಜರುಗುತ್ತವೆ. ಭಾರತೀಯ ಫೆಡರೇಷನ್ ಶ್ರೀಏಷ್ಯ (ಮಿಸ್ಟರ್ ಏಷ್ಯ) ಮತ್ತು ಶ್ರೀವಿಶ್ವ (ಮಿಸ್ಟರ್ ಯೂನಿವರ್ಸ್) ಸ್ಪರ್ಧೆಯಲ್ಲಿ ಭಾಗವಹಿಸಲು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕಳುಹಿಸುತ್ತದೆ. 

	ಕರ್ನಾಟಕದಲ್ಲಿ ಕೆ.ವಿ. ಅಯ್ಯರ್‍ರವರ ವ್ಯಾಯಾಮ ಶಾಲೆ (ಬೆಂಗಳೂರು), ಮಲ್ಲಸಜ್ಜನ ವ್ಯಾಯಾಮ ಶಾಲೆ (ಧಾರವಾಡ), ಮಾರುತಿ ವ್ಯಾಯಾಮ ಶಾಲೆ (ಮಂಗಳೂರು) ಮೊದಲಾದ ಪ್ರಸಿದ್ಧ ವ್ಯಾಯಾಮ ಶಾಲೆಗಳಿವೆ.		
	(ಜಿ.ಎಚ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ